ಕನ್ನಡದಲ್ಲಿ ವಿಜ್ಞಾನ ಪತ್ರಿಕೆಗಳು : ಕನ್ನಡದಲ್ಲಿ ವಿಜ್ಞಾನ ಪತ್ರಿಕೆಯ ಪ್ರಕಟನೆಯ ಸಾಹಸ ಸು. 80 ವರ್ಷಗಳ ಹಿಂದೆಯೇ ಆರಂಭವಾಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ಶ್ರೀ ನಂಗಪುರಂ ವೆಂಕಟೇಶ ಅಯ್ಯಂಗಾರ್ ಅವರುಗಳು ಪ್ರದೇಶ ಭಾಷೆಯಲ್ಲಿ ಜನರಿಗೆ ವಿಜ್ಞಾನದ ವಿಷಯಗಳನ್ನು ತಿಳಿಸಬೇಕಾದ ಅಗತ್ಯವನ್ನು ಮನಗಂಡು ವಿಜ್ಞಾನ ಪ್ರಚಾರಣೀ ಸಭಾ ಎಂಬ ಸಂಸ್ಥೆಯನ್ನು  ಸ್ಥಾಪಿಸಿದರು. ಈ ಸಭೆಯ ವತಿಯಿಂದ 1917 ಏಪ್ರಿಲ್ನಲ್ಲಿ ವಿಜ್ಞಾನ ಎಂಬ ಮಾಸಪತ್ರಿಕೆಯ ಮೊದಲ ಸಂಚಿಕೆ ಪ್ರಕಟವಾಯಿತು. ಆರಂಭದಲ್ಲಿ ಪತ್ರಿಕೆಯ ಮುಖ್ಯ ಉದ್ದೇಶವನ್ನು ವಿವರಿಸುತ್ತಾ ಜನಸಾಮಾನ್ಯರಲ್ಲೆಲ್ಲಾ ವಿಜ್ಞಾನವನ್ನು ಹರಡಿದ ಹೊರತು ದೇಶವು ಅಭಿವೃದ್ಧಿಗೆ ಬರಲಾರದು. ಇದಕ್ಕಾಗಿ ಆಂಗ್ಲಭಾಷೆಯಲ್ಲಿ ವಿಜ್ಞಾನ ಪರಿಶ್ರಮವುಳ್ಳ ದೇಶಾಭಿಮಾನಿಗಳು ಸಾವಕಾಶಮಾಡದೆ ಈ ಕೆಲಸದಲ್ಲಿ ತೊಡಗಬೇಕೆಂದು ನಮ್ಮ ಪ್ರಾರ್ಥನೆ. ಇದರಲ್ಲಿ ಆಧುನಿಕ ವಿಜ್ಞಾನದ ವಿಷಯಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಕೈಲಾದಮಟ್ಟಿಗೆ ತಿಳಿಗನ್ನಡದಲ್ಲಿ ಬರೆಯಲು ಪ್ರಯತ್ನಿಸಿರುತ್ತೇವೆ ಎಂದು ಹೇಳಿ 32 ಪುಟಗಳ ಸಂಚಿಕೆಯನ್ನು ತಿಂಗಳಿಗೊಮ್ಮೆ ಪ್ರಕಟಿಸಲು ಆರಂಭಿಸಿದರು. ಶ್ರೀಯುತರ ಕನ್ನಡಾಭಿಮಾನವೂ ವಿಜ್ಞಾನದ ಆಗುಹೋಗುಗಳನ್ನು ಜನಸಾಮಾನ್ಯರಿಗೆ ತಿಳಿಸಬೇಕೆಂಬ ಉತ್ಕಟೇಚ್ಛೆಯೂ ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆಯಲು ಇಚ್ಛಿಸುವವರಿಗೆ ಇಂದಿಗೂ ಸ್ಫೂರ್ತಿದಾಯಕ.

ಈ ಪತ್ರಿಕೆಯ ಲೇಖನಗಳು ಸರಳ ವಾಕ್ಯಗಳಿಂದ ಕೂಡಿ ಸುಲಲಿತವಾಗಿ ಓದಿಸಿಕೊಳ್ಳುತ್ತವೆ. ಇದರಲ್ಲಿನ ಹಲವಾರು ವಿಷಯಗಳು ಇಂದಿಗೂ ಪ್ರಸ್ತುತವೆನಿಸಿಕೊಳ್ಳುತ್ತವೆ. ಈ ಪತ್ರಿಕೆಯ ಲೇಖನಗಳಲ್ಲಿ ಅನೇಕ ಆಂಗ್ಲ ಪದಗಳಿಗೆ ಸಮಾನಾರ್ಥಕವಾದ ಕನ್ನಡ ಪಾರಿಭಾಷಿಕ ಪದಗಳನ್ನು ಮೊದಲ ಬಾರಿಗೆ ಬಳಕೆಗೆ ತಂದಿರುವುದನ್ನು ಗುರುತಿಸಬಹುದು. ಹೀಗೆ ಕನ್ನಡದಲ್ಲಿ ಪಾರಿಭಾಷಿಕ ಪದಗಳ ವ್ಯಾಪಕ ಬಳಕೆಗೆ ಈ ಪತ್ರಿಕೆ ನಾಂದಿ ಹಾಡಿತು ಎನ್ನಬಹುದು. ಇದರಲ್ಲಿನ ಹಲವು ಲೇಖನಗಳ ಶೈಲಿಯು ಆಕರ್ಷಕವಾಗಿದ್ದು ಈಗಿನ ಲೇಖಕರಿಗೂ ಮಾದರಿಯಾಗಿದೆ. ವಿಜ್ಞಾನವು ಯಾವುದೇ ದೇಶಭಾಷೆಯ ಅಳವಿಗೆ ಒಳಪಡಬಲ್ಲುದು ಎಂಬುದು ವಿಜ್ಞಾನ ಪತ್ರಿಕೆಯ ಲೇಖನಗಳನ್ನು ಓದಿದೊಡನೆ ಅರ್ಥವಾಗುತ್ತದೆ. ಕನ್ನಡ ವಿಜ್ಞಾನ ಸಾಹಿತ್ಯದ ಅಭಿವೃದ್ಧಿಗೆ ಈ ಪತ್ರಿಕೆಯ ಕಾಣಿಕೆ ಗಣನೀಯವಾದುದು.

ಪ್ರಕಾಶಕರು ನಮ್ಮ ಜನರಿಂದ ಇಂತಹ ಪತ್ರಿಕೆಗಳಿಗೆ ತಕ್ಕ ಪ್ರೋತ್ಸಾಹವು ದೊರೆಯುವುದು ಕೇವಲ ಅನುಮಾನದ ವಿಷಯವಾಗಿದೆ. ಪ್ರೋತ್ಸಾಹ ದೊರೆಯದೆ ಹೋದಲ್ಲಿ ಒಂದು ವರ್ಷದ ಮೇಲೆ ನಡೆಯಲಾರದು ಎಂದು ತಮ್ಮ ಅರಿಕೆಯಲ್ಲಿ ಊಹಿಸಿದ್ದಂತೆ ದುರದೃಷ್ಠವಶಾತ್ ಈ ವಿಜ್ಞಾನ ಮಾಸಪತ್ರಿಕೆಯು ಸು. ಒಂದೂವರೆ ವರ್ಷಗಳ ಕಾಲ ಮಾತ್ರ ಪ್ರಕಟವಾಗಿ ನಿಂತುಹೋಯಿತು.

ಆಗಿನ ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳೆವಣಿಗೆಯು ಮಂದಗತಿಯಲ್ಲಿದ್ದು, ಭಾರತದಲ್ಲಿ ವಿಜ್ಞಾನದ ಕಲಿಕೆ ಅಂಬೆಗಾಲಿಡುತ್ತಿದ್ದುದರಿಂದ ಈ ಪತ್ರಿಕೆಗೆ ಸಾರ್ವಜನಿಕರ ಪ್ರೋತ್ಸಾಹ ದೊರೆಯದಿದ್ದುದು ಆಶ್ಚರ್ಯವೇನಲ್ಲ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನಗಳೇ ಸರ್ವಸ್ವ ಎಂದು ಹೇಳುವ ಈ ಕಾಲದಲ್ಲಿ, ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಹೊರಬರುತ್ತಿರುವ ಲೇಖನಗಳು ಹಾಗೂ ಗ್ರಂಥಗಳ ಮಹಾಪುರದಲ್ಲಿ ಕನ್ನಡ ವಿಜ್ಞಾನ ಬರೆವಣಿಗೆಯ ಬಗ್ಗೆ ಸಾರ್ವಜನಿಕರಲ್ಲಿ ಇದೇ ಬಗೆಯ ಅನಾದರ, ನಿರುತ್ಸಾಹಗಳು ಕಂಡುಬರುತ್ತಿರುವುದು ವಿಪರ್ಯಾಸದ ಸಂಗತಿ.

ಮುಂದೆ ಕನ್ನಡದಲ್ಲಿ ಅನೇಕ ವೈಜ್ಞಾನಿಕ ಪುಸ್ತಕಗಳು, ಬಿಡಿ ಲೇಖನಗಳು ಪ್ರಕಟವಾಗುತ್ತಾ ಬಂದರೂ ವೈಜ್ಞಾನಿಕ ಲೇಖನಗಳಿಗೆ ಮೀಸಲಾದ ಪತ್ರಿಕೆಯ ಪ್ರಕಟನೆಯ ಎರಡನೆಯ ಪ್ರಯತ್ನ ಇದಾದ 33 ವರ್ಷಗಳ ನಂತರವೇ ಸಾಧ್ಯವಾಯಿತು ಎನ್ನಬೇಕು. ಈ ದಿಸೆಯಲ್ಲಿ 1950ರಲ್ಲಿ ಬಿ.ವಿ. ಸುಬ್ಬರಾಯಪ್ಪನವರು ಪ್ರಕಟಿಸಲಾರಂಭಿಸಿದ ವಿಜ್ಞಾನ ಯುಗ ಎಂಬ ಮಾಸಪತ್ರಿಕೆಯೂ ಸಹ ಸು. 9 ತಿಂಗಳು ಮಾತ್ರ ಬೆಳಕನ್ನು ಕಂಡಿತು.
ಸ್ವಾತಂತ್ರ್ಯಾನಂತರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ದೊರೆತ ಪ್ರಾಮುಖ್ಯತೆಯ ಕಾರಣ ಈ ವಿಷಯಗಳ ಅಧ್ಯಯನಕ್ಕೆ ಅತಿ ಹೆಚ್ಚಿನ ಮಹತ್ವ ದೊರೆಯಲಾರಂಭಿಸಿತು. ವೈಜ್ಞಾನಿಕ, ತಾಂತ್ರಿಕ ಹಾಗೂ ಔದ್ಯಮಿಕ ಸಂಸ್ಥೆಗಳು ಹುಟ್ಟಿಕೊಂಡು ವ್ಯಾಪಕವಾಗಿ ಬೆಳೆಯಲಾರಂಭಿಸಿದವು. ಈ ಕಾಲದಲ್ಲಿ ಕನ್ನಡಾಭಿಮಾನಿಗಳಾದ ವಿಜ್ಞಾನ ಪದವೀಧರರ ಸಂಖ್ಯೆಯು ಗಣನೀಯವಾಗಿ ಬೆಳೆಯಿತು. ಕಾಲೇಜುಮಟ್ಟದಲ್ಲೂ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸುವ ಪ್ರಯತ್ನಗಳು ನಡೆದವು. ಇದೇ ಸಂದರ್ಭದಲ್ಲಿ ಶಿವರಾಮ ಕಾರಂತರ ವಿಜ್ಞಾನ ಪ್ರಪಂಚ ವಿಶ್ವಕೋಶ, ಆರ್.ಎಲ್. ನರಸಿಂಹಯ್ಯನವರ ಹಲವಾರು ವಿಜ್ಞಾನ ಗ್ರಂಥಗಳು, ಸೆಂಟ್ರಲ್ ಕಾಲೇಜು ಕರ್ನಾಟಕ ಸಂಘ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಪ್ರಸರಾಂಗದಿಂದ ಹಲವಾರು ವಿಜ್ಞಾನ ಗ್ರಂಥಗಳ ಪ್ರಕಟಣೆಗಳಿಂದ ಉತ್ತೇಜಿತವಾಗಿ ವಿಜ್ಞಾನದ 2 ಪತ್ರಿಕೆಗಳು ಪ್ರಕಟವಾಗಲಾರಂಭಿಸಿದವು. ಮೊದಲನೆಯದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ಲಿನ ರೀಜನಲ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ 1965ರಲ್ಲಿ ಆರಂಭವಾದ ವಿಜ್ಞಾನಲೋಕ ಮಾಸಪತ್ರಿಕೆಯು 12 ವರ್ಷಗಳ ಕಾಲ ಸತತವಾಗಿ ಪ್ರಕಟಗೊಂಡು ಇತಿಹಾಸವನ್ನೇ ನಿರ್ಮಿಸಿತು. ಶ್ರೀ ಪಾ. ದೇವರಾಯ ಅವರ ತಣಿಯದ ಉತ್ಸಾಹ ಶ್ರೀ ಅಡ್ಯನಡ್ಕ ಕೃಷ್ಣಭಟ್ಟ ಅವರ ಸಂಪಾದಕತ್ವ ಮತ್ತು ಇವರ ಹಲವಾರು ಮಿತ್ರರ ಆತ್ಮೀಯ ಸಹಕಾರಗಳಿಂದ ಈ ಪತ್ರಿಕೆಯ ಪ್ರಕಟನೆ ಸಾಕಷ್ಟು ಯಶಸ್ವಿಯೂ ಆಯಿತೆನ್ನಬಹುದು. ಸರಳ ವಿಜ್ಞಾನ ಲೇಖನಗಳಲ್ಲದೆ ವಿಜ್ಞಾನ ಮುನ್ನಡೆ, ಸುದ್ದಿ ಸಾರ, ನಡೆದದ್ದು, ಕಂಡದ್ದು, ಏಕೆ ಹೀಗಾಯಿತು, ನೀವೆಷ್ಟು ಕಲಿತಿರಿ ಮುಂತಾದ ಜನಪ್ರಿಯ ಶೀರ್ಷಿಕೆಗಳಡಿಯಲ್ಲಿ ಲೇಖನಗಳ ಪ್ರಕಟನೆಗೆ ವಿದ್ಯಾರ್ಥಿಗಳನ್ನೂ, ಆಸಕ್ತ ಸಾರ್ವಜನಿಕರನ್ನೂ ತೊಡಗಿಸಿದ ಈ ಪತ್ರಿಕೆಯ ಪ್ರಕಾಶಕರ ಪ್ರಯತ್ನ ಅಭಿನಂದನಾರ್ಹವಾದುದು. ಅಚ್ಚುಕಟ್ಟಾಗಿ, ವ್ಯವಸ್ಥಿತ ರೀತಿಯಲ್ಲಿ ಪ್ರಕಟವಾಗುತ್ತಿದ್ದ ಈ ಪತ್ರಿಕೆಯು 12 ವರ್ಷಗಳ ನಂತರ ಕಾರಣಾಂತರಗಳಿಂದ ನಿಂತುಹೋದುದು ವಿಷಾದಕರ ಸಂಗತಿ.

ಇದೇ ಕಾಲಾವಧಿಯಲ್ಲಿ ಅಂದರೆ 1969ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಕಟನೆಯಾದ ಪ್ರಬುದ್ಧ ಕರ್ನಾಟಕದ ಮಾದರಿಯಲ್ಲೇ ವಿಜ್ಞಾನ ಕರ್ನಾಟಕ ಎಂಬ ತ್ರೈಮಾಸಿಕ ಪತ್ರಿಕೆಯು ಪ್ರಕಟವಾಗಲಾರಂಭಿಸಿತು. ಇದರ ಪ್ರಕಟನೆಗೆ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸವಲತ್ತುಗಳು, ಸಂಪಾದನೆ ಹಾಗೂ ಪ್ರಸಾರ ಕಾರ್ಯಗಳಿಗೆ ಬೇಕಾದ ಸಿಬ್ಬಂದಿಗಳೆಲ್ಲವೂ ಕೂಡಿ ಸುಸಜ್ಜಿತ ವ್ಯವಸ್ಥೆ ಇದ್ದ ಕಾರಣ ಕನ್ನಡ ವಿಜ್ಞಾನ ಸಾಹಿತ್ಯದ ಬೆಳೆವಣಿಗೆ ಮತ್ತು ಜನಸಾಮಾನ್ಯರಿಗೆ ಆಧುನಿಕ ವಿಜ್ಞಾನ, ತಂತ್ರಜ್ಞಾನಗಳನ್ನು ಪರಿಚಯಿಸಲು ವಿಜ್ಞಾನ ಕರ್ನಾಟಕವು ಬಹುಮುಖ್ಯವಾದ ಸಾಧನವಾಗಬಹುದೆಂದು ನಿರೀಕ್ಷಿಸಲಾಯಿತು. ಈ ನಿರೀಕ್ಷೆಯು ನಿಜವೆನ್ನುವಂತೆ ಜೆ.ಆರ್. ಲಕ್ಷ್ಮಣರಾಯರ ದಕ್ಷ ನೇತೃತ್ವದಲ್ಲಿ ಉತ್ತಮ ಲೇಖನಗಳನ್ನೊಳಗೊಂಡು ವಿಜ್ಞಾನ ಕರ್ನಾಟಕವು ಆಕರ್ಷಕವಾಗಿ ಪ್ರಕಟವಾಗಲಾರಂಬಿಸಿತು. ಅನೇಕ ಹಿರಿಯ ಪ್ರಾಧ್ಯಾಪಕರುಗಳು ಸರಳ ಸುಂದರ ಶೈಲಿಯಲ್ಲಿ. ಆಧುನಿಕ ವಿಜ್ಞಾನದ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಸಾಧನೆಗಳ ಪರಿಚಯ ಮಾಡಿಕೊಡಲಾರಂಭಿಸಿದರು. ಜೆ.ಆರ್. ಲಕ್ಷ್ಮಣರಾವ್, ಜಿ.ಟಿ. ನಾರಾಯಣರಾವ್, ಚಕ್ರವರ್ತಿ, ದೇವರಾಜ ಸರ್ಕಾರ್ ಮುಂತಾದ ಹಿರಿಯ ಪ್ರಾಧ್ಯಾಪಕರೂ ಹಾಗೂ ವಿಜ್ಞಾನಿಗಳು ಬಹುವಾಗಿ ಶ್ರಮಿಸಿ ಕನ್ನಡದ ವೈಜ್ಞಾನಿಕ ಲೇಖನಗಳ ಬರವಣಿಗೆಗೆ ಹೊಸ ಆಯಾಮವನ್ನು ಒದಗಿಸಿಕೊಟ್ಟರು. ಸಿ.ವಿ. ರಾಮನ್, ಆರ್.ಎಲ್. ನರಸಿಂಹಯ್ಯ ಅವರನ್ನು ಕುರಿತ ವಿಜ್ಞಾನ ಕರ್ನಾಟಕದ ವಿಶೇಷ ಸಂಚಿಕೆಗಳು ಶ್ರೇಷ್ಠಮಟ್ಟದ್ದಾಗಿವೆ. ವಿಜ್ಞಾನ ಲೇಖನಗಳ ಅನುವಾದಕ್ಕೆ ಹಲವಾರು ಅನುಕರಣೀಯ ಮಾದರಿಗಳು ಈ ಪತ್ರಿಕೆಯಲ್ಲಿ ಪ್ರಕಟವಾಗಿವೆ. ದುರದೃಷ್ಟವಶಾತ್ ವಿಶ್ವವಿದ್ಯಾನಿಲಯವು ಇದರ ಪ್ರಕಟನೆಯಲ್ಲಿ ಹೆಚ್ಚು ಆಸಕ್ತಿ ತೋರದೆ ಹೋದುದರಿಂದಲೂ, ಆರ್ಥಿಕ ಮುಗ್ಗಟ್ಟಿನಿಂದಲೂ ಮತ್ತು ಹಲವು ವೈಯಕ್ತಿಕ ಕಾರಣಗಳಿಂದಲೂ ಸು. 15 ವರ್ಷಗಳ ನಂತರ ವಿಜ್ಞಾನ ಕರ್ನಾಟಕದ ಪ್ರಕಟನೆಯು ನಿಂತುಹೋಯಿತು. ಕನ್ನಡದ ದೃಷ್ಟಿಯಿಂದ ಇದು ಭಾರಿ ಹಿನ್ನೆಡೆ ಎನ್ನಬಹುದು.

ಇದರಂತೆಯೇ ಬೆಂಗಳೂರು ವಿಶ್ವವಿದ್ಯಾನಿಲಯದಿಂದ 1976ರಲ್ಲಿ ಆರಂಭವಾಗಿ ಉತ್ತಮ ವಿಜ್ಞಾನ ಲೇಖನಗಳನ್ನು ಒಳಗೊಂಡು ಪ್ರಕಟವಾಗುತ್ತಿದ್ದ ಜನಪ್ರಿಯ ವಿಜ್ಞಾನ ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಲಾರಂಭಿಸಿದ ವಿಜ್ಞಾನ ಪತ್ರಿಕೆಗಳೂ ಸಹ ಕೆಲವೇ ವರ್ಷಗಳಲ್ಲಿ ಆರ್ಥಿಕ ಮುಗ್ಗಟ್ಟು ವೈಯಕ್ತಿಕ ಸಮಸ್ಯೆ ಹಾಗೂ ವಿಶ್ವವಿದ್ಯಾನಿಲಯಗಳ ಅನಾದರಗಳಿಗೆ ಈಡಾಗಿ ನಿಂತುಹೋದುದು ದೌರ್ಭಾಗ್ಯವೇ ಸರಿ. ವಿಜ್ಞಾನ, ತಂತ್ರಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿನ ನಾಗಾಲೋಟದ ಬೆಳೆವಣಿಗೆ, ಈ ವಿದ್ಯಾಭ್ಯಾಸಕ್ಕೆ ಈಗ ದೊರೆತಿರುವ ಅತಿ ಹೆಚ್ಚಿನ ಪ್ರಾಮುಖ್ಯತೆ, ಕರ್ನಾಟಕದಲ್ಲಿ ಸ್ಥಾಪಿತಗೊಂಡಿರುವ ವಿಜ್ಞಾನ ತಂತ್ರಜ್ಞಾನ ಸಂಸ್ಥೆಗಳ ಸಂಖ್ಯಾಬಾಹುಳ್ಯವನ್ನು ಗಮನಿಸಿ ಕರ್ನಾಟಕ ರಾಜ್ಯದ ವಿಶ್ವವಿದ್ಯಾನಿಲಯಗಳು ವಿಜ್ಞಾನ ಪತ್ರಿಕೆಗಳಿಗೆ ಇನ್ನೂ ವಿಶಾಲ ತಳಹದಿ, ಆರ್ಥಿಕ ಭದ್ರತೆ ಮತ್ತು ಸಿಬ್ಬಂದಿ ವರ್ಗಗಳನ್ನು ಒದಗಿಸಿ ಪ್ರಕಟನೆಗೆ ಪ್ರೋತ್ಸಾಹಿಸುವುದು ತನ್ನ ಆದ್ಯ ಕರ್ತವ್ಯವನ್ನಾಗಿಸಿಕೊಳ್ಳಬೇಕೆನಿಸುತ್ತದೆ.

ಈ ವಿಫಲತೆಗಳ ಜೊತೆಯಲ್ಲಿಯೇ 1970ರ ದಶಕದಲ್ಲಿ ಹೊಸದಾಗಿ ಎರಡು ವಿಜ್ಞಾನ ಪತ್ರಿಕೆಗಳು ಹುಟ್ಟಿಕೊಂಡು ಜನತೆಯಲ್ಲಿ ಕನ್ನಡದ ಮೂಲಕ ವಿಜ್ಞಾನದ ಕಂಪನ್ನು ಹರಡಲಾರಂಭಿಸಿದವು. 1975ರಲ್ಲಿ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳ ಕನ್ನಡ ಸಾಂಸ್ಕೃತಿಕ ಸಂಘದವರ ವಾರ್ಷಿಕ ವಿಜ್ಞಾನ ಪತ್ರಿಕೆ ಕಣಾದ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ 1976ರಲ್ಲಿ ಆರಂಭವಾದ ಮಾಸಪತ್ರಿಕೆ ಬಾಲವಿಜ್ಞಾನಗಳು ಇಂದಿಗೂ ಯಶಸ್ವಿಯಾಗಿ ಪ್ರಕಟವಾಗುತ್ತಿವೆ. ವಿಜ್ಞಾನ ಪತ್ರಿಕೆಗಳ ಪ್ರಕಟನೆಯಲ್ಲಿ ಹಾಗೂ ಹಲವಾರು ವಿಶ್ವಕೋಶಗಳ ಸಂಪಾದಕರು ಹಾಗೂ ಹಿರಿಯರಾದ ಜೆ.ಆರ್. ಲಕ್ಷ್ಮಣರಾವ್, ಅಡ್ಯನಡ್ಕ ಕೃಷ್ಣಭಟ್ಟ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರಾಧ್ಯಾಪಕರಾಗಿದ್ದ ದಿವಂಗತ ಎಂ.ಎ. ಸೇತೂರಾವ್, ಡಿ.ಆರ್. ಬಳೂರಗಿ, ಎಂ.ಆರ್. ನಾಗರಾಜ್ ಮುಂತಾದವರ ಸಂಘಟಿತ ಪ್ರಯತ್ನಗಳಿಂದಲೂ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಲಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಅನುದಾನಗಳಿಂದಲೂ, ವ್ಯವಸ್ಥಿತ ಕಾರ್ಯಾಲಯದಿಂದಲೂ ಸಜ್ಜುಗೊಂಡು ಬಾಲವಿಜ್ಞಾನವು ಕಳೆದ 30 ವರ್ಷಗಳಿಂದ ಯಶಸ್ವಿಯಾಗಿ ಪ್ರಕಟವಾಗುತ್ತಿದೆ. ರಾಜ್ಯದ ಎಲ್ಲಾ ಶಾಲೆಗಳಿಗಾಗಿ ಇದರ ಪ್ರತಿಗಳನ್ನು ಸರ್ಕಾರವೇ ಕೊಳ್ಳುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ಈ ಪತ್ರಿಕೆ ಉಪಯುಕ್ತವಾಗಿ ಮನ್ನಣೆ ಗಳಿಸಿಕೊಂಡಿದೆ. ಇದರಲ್ಲಿನ ಲೇಖನಗಳು ಶಾಲಾ ವಿದ್ಯಾರ್ಥಿಗಳನ್ನು ನೇರವಾಗಿ ಸಂಬೋಧಿಸುತ್ತವೆ. ಪ್ರಸಿದ್ಧ ವಿಜ್ಞಾನಿಗಳ ಪರಿಚಯಾತ್ಮಕ ಲೇಖನಗಳು, ನೀನೇ ಮಾಡಿ ನೋಡು ಶೀರ್ಷಿಕೆಯಲ್ಲಿನ ಪ್ರಯೋಗಗಳ ಪರಿಚಯ, ಪ್ರಶ್ನೋತ್ತರಗಳು ಯಶಗಳಿಸಿವೆ. ರಾಜ್ಯದ ವಿವಿಧ ನಗರಗಳಲ್ಲಿ ವಿಜ್ಞಾನಪರಿಷತ್ತಿನ ಹಲವು ಘಟಕಗಳು ಪ್ರಾರಂಭಗೊಂಡು ಬಾಲವಿಜ್ಞಾನದ ಉಪಯುಕ್ತತೆ ಮತ್ತು ಬಳಕೆಯನ್ನು ಹೆಚ್ಚಿಸಿವೆ. ಪ್ರತಿ ತಿಂಗಳೂ ಬಾಲವಿಜ್ಞಾನದ ಸಹಸ್ರಾರು ಪ್ರತಿಗಳು ಈಗ ಮುದ್ರಣಗೊಳ್ಳುತ್ತಿವೆ. ಹಲವರ ದೂರದೃಷ್ಟಿಯ ಅಭಾವದಿಂದಾಗಿ ಕೆಲವು ವರ್ಷಗಳ ಹಿಂದೆ ಇದರ ಪ್ರಕಟನೆಯೂ ನಿಲ್ಲುವ ಹಂತಕ್ಕೆ ಬಂದಿತ್ತು. ಆದರೆ ಪ್ರಾಜ್ಞರ ಒತ್ತಾಯ ಮತ್ತು ಸಮಯೋಚಿತ ತಿಳಿವಳಿಕೆಯಿಂದಾಗಿ ಒದಗಿಬಂದ ಆ ಕುತ್ತಿನಿಂದ ಬಾಲವಿಜ್ಞಾನವು ಪಾರಾಯಿತು.

1975ರಲ್ಲಿ ಪ್ರಕಟಣೆ ಆರಂಭಿಸಿದ ಕಣಾದ ವಿಜ್ಞಾನ ಪತ್ರಿಕೆಯು ಆಧುನಿಕ ವಿಜ್ಞಾನವನ್ನು ಭಾರತೀಯ ಭಾಷೆಗಳಲ್ಲಿ ಪ್ರಸಾರ ಮಾಡುವ ಒಂದು ಅಪುರ್ವ ಪ್ರಯತ್ನವೆನಿಸಿ ಪ್ರಸಿದ್ಧವಾಗಿದೆ. ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳ ವಿಜ್ಞಾನಿಗಳ ಮನದ ಆಳದಲ್ಲಿ ಚಿಗುರಿ ಫಲಿಸಿರುವ, ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ಸೇವೆ ಸಲ್ಲಿಸುತ್ತಿರುವ ಕಣಾದದ ಗುರಿ ಸ್ವಲ್ಪ ವಿಭಿನ್ನವಾದುದು. ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಒಡನಾಟದಲ್ಲಿರುವ ವಿಜ್ಞಾನಿಗಳು, ತಮ್ಮ ಅಪಾರ ಮಾಹಿತಿ ಭಂಡಾರವನ್ನು ಮಾತೃಭಾಷೆಯಲ್ಲಿ ಸಮಾಜದೊಡನೆ ಹಂಚಿಕೊಳ್ಳುವುದು ತಮ್ಮ ಕರ್ತವ್ಯವೆಂದು ಭಾವಿಸಿರುವುದೇ ಈ ಪ್ರಕಟನೆಗೆ ಕಾರಣವಾಯಿತು. ಭಾರತದಾದ್ಯಂತ ಹರಡಿಕೊಂಡು ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ತೊಡಗಿರುವ ಅನೇಕ ವೈಜ್ಞಾನಿಕ ಸಂಸ್ಥೆಗಳನ್ನು ನಿರ್ದೇಶಿಸುತ್ತಿರುವ, ಕೇಂದ್ರ ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಮಂಡಲಿಯ (ಸಿ.ಎಸ್.ಐಆರ್.) ನಿರ್ದೇಶಕ ಸೂತ್ರಗಳಲ್ಲಿ ವಿಜ್ಞಾನಿಗಳು ತಮ್ಮ ಅರಿವಿಗೆ ಬಂದ ಸಂಗತಿಗಳನ್ನು ಜನಸಾಮಾನ್ಯರಿಗೆ ಅವರದೇ ಭಾಷೆಯಲ್ಲಿ ತಿಳಿಸಬೇಕೆಂಬ ಸೂತ್ರವೂ ಒಂದಾಗಿದ್ದು, ಅಂತೆಯೇ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಯ ವಿಜ್ಞಾನಿಗಳು ವೈಮಾಂತರಿಕ್ಷ ಕ್ಷೇತ್ರವಲ್ಲದೆ ಇತರ ಅತ್ಯಾಧುನಿಕ ಸಂಶೋಧನಾ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಅನೇಕ ಸಂಗತಿಗಳನ್ನು ಸಾಧ್ಯವಾದಷ್ಟೂ ಸರಳವಾಗಿ ಕಣಾದದ ಮೂಲಕ ತಿಳಿಸಿಕೊಡಲು ಯತ್ನಿಸಿದ್ದಾರೆ. ಭಾರತದ ಯಾವುದೇ ವ್ಶೆಜ್ಞಾನಿಕ ಸಂಸ್ಥೆಯ ವಿಜ್ಞಾನಿ ಸಮುದಾಯವೂ ಈ ಪ್ರಯತ್ನವನ್ನು ನಡೆಸದಿರುವುದು ಸಾಮಾನ್ಯರನ್ನು ವಿಜ್ಞಾನ ಕ್ಷೇತ್ರದಿಂದ ಹೊರಗುಳಿಯುವಂತೆ ಮಾಡಿದೆ. ಕಣಾದವು ಇತರ ವಿಜ್ಞಾನಿಗಳಿಗೆ ಒಂದು ಮಾದರಿ ಎಂಬ ಅಭಿಪ್ರಾಯವು ಕನ್ನಡ ಸಾಂಸ್ಕೃತಿಕ ಸಂಘದ ಮತ್ತು ಎನ್.ಎ.ಎಲ್ನ ಹೆಗ್ಗಳಿಕೆಯಾಗಿದೆ. ಕಣಾದದಲ್ಲಿ ಈವರೆಗೆ 600 ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿದ್ದು 200ಕ್ಕೂ ಹೆಚ್ಚು ಲೇಖನಗಳು ವೈಮಾಂತರಿಕ್ಷ ಕ್ಷೇತ್ರಗಳಿಗೆ ಸಂಬಂಧಿಸಿವೆ. ವಿಜ್ಞಾನ ಪ್ರಪಂಚದ ಪ್ರಚಲಿತ ವಿದ್ಯಮಾನಗಳನ್ನು ತೆರೆದಿಡುತ್ತಿರುವ ಕಣಾದದ ಲೇಖನಗಳು ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಹತ್ತಾರು ಸರಳ, ಜನಪ್ರಿಯ ಲೇಖನಗಳಿಗೆ ದಾರಿಮಾಡಿಕೊಡಬಲ್ಲವು ಎಂಬುದು ಅನೇಕರ ಅಭಿಪ್ರಾಯವಾಗಿದೆ. ಜೊತೆಗೆ ಕಣಾದದ ವತಿಯಿಂದ ಪ್ರತಿವರ್ಷ ನಡೆಸಲಾಗುತ್ತಿರುವ ವಿಜ್ಞಾನ ಪ್ರಬಂಧ ಸ್ಪರ್ಧೆಯು ರಾಜ್ಯಾದ್ಯಂತ ಅನೇಕ ಲೇಖಕರ ಸೃಷ್ಟಿಗೆ ಮತ್ತು ವಿಜ್ಞಾನ ಬರೆವಣಿಗೆಗೆ ಸ್ಫೂರ್ತಿಯಾಗಿದೆ. ಕಣಾದದ ವಿಜ್ಞಾನ ರಸಪ್ರಶ್ನೆಯು, ಕನ್ನಡ ವಿದ್ಯಾರ್ಥಿಗಳಲ್ಲಿ ಪ್ರೌಢ ವಿಜ್ಞಾನ ಸಾಹಿತ್ಯವನ್ನೋದುವ ಅಭಿರುಚಿಯನ್ನು ಬೆಳೆಸುತ್ತಿದೆ. ಸಿ.ಎಸ್.ಐ.ಆರ್ನ ಆರ್ಥಿಕ ಸಹಾಯ, ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳ ಪರೋಕ್ಷ ಬೆಂಬಲ ಹಾಗೂ ಅನೇಕ ಉತ್ಸಾಹಿ ಕಾರ್ಯಕರ್ತರ ಶ್ರಮದ ಫಲವಾಗಿ ಕಣಾದವು ಉಳಿದು ಬೆಳೆಯುತ್ತಿದೆ.

ಕನ್ನಡ ವಿಜ್ಞಾನಿಗಳು ಎಸಗಿದ ಮತ್ತೊಂದು ಸಾಹಸ ಬೆಳಗು ವಿಜ್ಞಾನ ಪತ್ರಿಕೆಯ ಪ್ರಕಟನೆ. ಮುಂಬೈನಲ್ಲಿರುವ ಭಾಭಾ ಅಣುಶಕ್ತಿ ಕೇಂದ್ರದ ಕನ್ನಡ ಸಂಘವು ಈ ಪತ್ರಿಕೆಯನ್ನು ಪ್ರಕಟಿಸುತ್ತಿತ್ತು. ಅನೇಕ ಮೌಲಿಕ ಲೇಖನಗಳು ಈಗಾಗಲೇ ಇದರಲ್ಲಿ ಬೆಳಕನ್ನು ಕಂಡಿವೆ. ಅಚ್ಚುಕಟ್ಟಾಗಿ ಈ ಪತ್ರಿಕೆಯನ್ನು ಹೊರತರುತ್ತಿದ್ದ ಕಾರ್ಯಕರ್ತರು ಅಭಿನಂದನಾರ್ಹರು. ರಾಮಚಂದ್ರ ಭಟ್, ವ್ಯಾಸರಾವ್ ನಿಂಜೂರು ಮುಂತಾದವರ ಶ್ರಮ ಸಾರ್ಥಕವಾದುದು. ಈ ಪತ್ರಿಕೆಯ ಅಂಗವಾಗಿ ಎರಡು ವರ್ಷಗಳಿಗೊಮ್ಮೆ ಆಧುನಿಕ ವಿಜ್ಞಾನ ವಿಷಯ ವೊಂದನ್ನಾರಿಸಿಕೊಂಡು ಕನ್ನಡದಲ್ಲಿ ವಿಚಾರ ಸಂಕಿರಣವನ್ನು ಏರ್ಪಡಿಸಿ ಅಲ್ಲಿ ಮಂಡಿಸಲ್ಪಟ್ಟ ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದುದು ವಾಡಿಕೆ. ಮುಂಬೈನ ಕನ್ನಡ ಮಾಧ್ಯಮದ ಶಾಲೆಗಳ ವಿದ್ಯಾರ್ಥಿಗಳಿಗಾಗಿ ವೈಜ್ಞಾನಿಕ ಲೇಖನ ಸ್ಪರ್ಧೆಯ ಆಯೋಜನೆ ಮತ್ತು ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ವಿಷಯವನ್ನು ಕುರಿತ ವಿಜ್ಞಾನ ಲೇಖನ ಸ್ಪರ್ಧೆಯ ಆಯೋಜನೆ, ಬೆಳಗು ಪ್ರಕಟನೆಯ ಮೈಲುಗಲ್ಲುಗಳಾಗಿದ್ದವು. 
ಇಂತಹ ಮತ್ತೊಂದು ಪ್ರಯತ್ನವನ್ನೂ ಇಲ್ಲಿ ಉಲ್ಲೇಖಿಸಬಹುದು. ಮೈಸೂರಿನಲ್ಲಿರುವ ಕೇಂದ್ರ ಆಹಾರ ಸಂಶೋಧನಾಲಯದ ಕೆಲವು ಕಾರ್ಯಕರ್ತರ ಉತ್ಸಾಹದ ಪ್ರಯತ್ನಗಳಿಂದ ಆಹಾರ ಸಂಶೋಧನಾಲಯವು ತನ್ನ ಅಧಿಕೃತ ಪ್ರಕಟನೆಯನ್ನಾಗಿ ಆಹಾರ ವಿಜ್ಞಾನ ಎಂಬ ಮಾಸಪತ್ರಿಕೆಯನ್ನು 1960ರ ದಶಕದಲ್ಲೇ ಪ್ರಕಟಿಸಲಾರಂಭಿಸಿತು. ಹಲವು ಸಹಸ್ರ ಸಂಖ್ಯೆಯಲ್ಲಿ ಮುದ್ರಣವಾಗಿ ಆಹಾರ ವಿಜ್ಞಾನವನ್ನು ಜನತೆಯ ಬಳಿಗೆ ಕೊಂಡೊಯ್ಯುತ್ತಾ ಬಹು ಯಶಸ್ವಿಯಾಗಿ ಪ್ರಕಟವಾಗುತ್ತಿದ್ದ ಈ ಆಹಾರ ವಿಜ್ಞಾನ ಪತ್ರಿಕೆಯೂ ಸಹ ಇದ್ದಕ್ಕಿದ್ದಂತೆ 1990ರ ವೇಳೆಗೆ ನಿಂತುಹೋಯಿತು. ಈ ನಿಲುಗಡೆ ಯಾವ ರೀತಿಯಲ್ಲೂ ಸಮರ್ಥನೀಯ ವಲ್ಲ. ಈಗಲೂ ಈ ಪತ್ರಿಕೆಯು ಪುನರಾರಂಭ ವಾಗುವುದನ್ನೇ ಕನ್ನಡಿಗರು ನಿರೀಕ್ಷಿಸುತ್ತಿದ್ದಾರೆ.

ಕನ್ನಡದಲ್ಲಿ ಪತ್ರಿಕಾ ಪ್ರಕಟನೆಯೇ ಒಂದು ಗಂಭೀರ ಸಮಸ್ಯೆಯಾಗಿರುವ ಈ ಕಾಲದಲ್ಲಿ 1992 ಜುಲೈನಿಂದ ಪ್ರಕಟವಾಗುತ್ತಿರುವ ದಿಕ್ಸೂಚಿ ಎಂಬ ಮಾಸಪತ್ರಿಕೆಯು ರಂಜನೆಗೆ ಪ್ರಾಮುಖ್ಯತೆ ನೀಡದೆ, ಕೇವಲ ತಿಳಿವಳಿಕೆ ನೀಡುವ, ಬಹುಮಟ್ಟಿಗೆ ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸುತ್ತಿದೆ. ಪ್ರಚಲಿತ ವಿದ್ಯಮಾನಗಳನ್ನು ಕುರಿತ ಮುಖಪುಟ ಲೇಖನಗಳು, ಗಣಕದ ಬಗ್ಗೆ ಪುರ್ಣ ಅರಿವನ್ನು ನೀಡುವ ಲೇಖನಮಾಲೆ, ಪ್ರಶ್ನೋತ್ತರಗಳು, ಪ್ರತಿಪುಟದ ಅಡಿಯಲ್ಲಿ ವೈಜ್ಞಾನಿಕ ಸಂಗತಿಯ ಚುಟುಕುಗಳು ಹೀಗೆ ಮುದ್ರಿತವಾಗುವ ಅನೇಕ ಪುಟಗಳು ವೈಜ್ಞಾನಿಕ ವಿಚಾರಗಳನ್ನು ಕನ್ನಡದಲ್ಲಿ ಓದುವ ಪ್ರವೃತ್ತಿಯನ್ನು ಜನತೆಯಲ್ಲಿ ಬೆಳೆಸುವುದಕ್ಕೆ ಸಹಾಯಕವಾಗಿವೆ. ಈ ಪತ್ರಿಕೆಯು ಸಾಕಷ್ಟು ಪ್ರಸಾರದಲ್ಲಿರುವುದು ಸಂತಸದ ಸಂಗತಿ. ಈ ಪತ್ರಿಕೆಯ ಪ್ರಕಾಶಕರು ವೈದ್ಯ ವಿಜ್ಞಾನಕ್ಕೆ ಮೀಸಲಾದ ಜೀವನಾಡಿ ಎಂಬ ಪತ್ರಿಕೆಯ ಪ್ರಕಟನೆಯನ್ನು ಪ್ರಾರಂಭಿಸಿ ಪ್ರಕಟಿಸುತ್ತಿದ್ದಾರೆ.
ಸು. ಹತ್ತು ವರ್ಷಗಳ ಹಿಂದೆ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಪುಟಾಣಿ ವಿಜ್ಞಾನ ಎಂಬ ಮಾಸಪತ್ರಿಕೆ ಪ್ರಕಟನೆಯ ಸಾರ್ಥಕ ಪ್ರಯತ್ನವೂ ಆರಂಭವಾಯಿತು. ಚಿತ್ರದುರ್ಗದ ಹಲವು ಉತ್ಸಾಹಿ ಕಾರ್ಯಕರ್ತರ ಈ ಪ್ರಕಟನೆಯ ಭಾಷೆ ಸರಳವಾಗಿದ್ದು, ವಿಪುಲ ರೇಖಾಚಿತ್ರಗಳು ಮತ್ತು ಸುಲಭ ಮಾಹಿತಿಗಳೊಡನೆ ಮಕ್ಕಳಿಗೆ ವಿಜ್ಞಾನದ ಸಂಗತಿಗಳನ್ನು ತಿಳಿಸುತ್ತಿತ್ತು. ದುರದೃಷ್ಟವಶಾತ್ ಈ ಪತ್ರಿಕೆಯ ಪ್ರಕಟಣೆಯೂ ನಿಂತುಹೋಯಿತು.

ಕನ್ನಡ ವಿಜ್ಞಾನ ಪತ್ರಿಕೆಗಳ ಪ್ರಕಟಣೆಗಳ ಮತ್ತೊಂದು ಪ್ರಮುಖ ಘಟ್ಟ ವಿಜ್ಞಾನ ಸಂಗಾತಿ ಮಾಸಪತ್ರಿಕೆಯ ಪ್ರಕಟಣೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ತನ್ನ ಧ್ಯೇಯೋದ್ದೇಶ ಗಳಿಗೆ ಅನುಗುಣವಾಗಿ 1993 ಆಗಸ್ಟ್‌ನಿಂದ ಪ್ರಕಟಿಸುತ್ತಿದ್ದ ಈ ಪತ್ರಿಕೆಯು ವರ್ಣಮಯ ಚಿತ್ರಗಳನ್ನೊಳಗೊಂಡು ಸುಂದರವಾಗಿ ಮುದ್ರಣಗೊಳ್ಳುತ್ತಿತ್ತು. ಪ್ರಸಿದ್ಧ ಇಂಗ್ಲಿಷ್ ಮಾಸಪತ್ರಿಕೆ ಸೈನ್ಸ್‌ ರಿಪೋರ್ಟರ್ನ ಸಂಪಾದಕ ವರ್ಗದವರ ಸಲಹೆ ಸಹಕಾರಗಳನ್ನು ಒಳಗೊಂಡ ಈ ಪತ್ರಿಕೆಯಲ್ಲಿ ಅನೇಕ ಶ್ರೇಷ್ಠಮಟ್ಟದ ಲೇಖನಗಳು ಪ್ರಕಟವಾಗಿವೆ. ಈ ಪತ್ರಿಕೆಯೂ ಗಟ್ಟಿಯಾಗಿ ನಿಂತು ಕನ್ನಡ ವಿಜ್ಞಾನ ಸಾಹಿತ್ಯದ ಬೆಳೆವಣಿಗೆಗೆ ಹೆಚ್ಚಿನ ಕಾಣಿಕೆ ನೀಡಲೆಂದು ನಿರೀಕ್ಷಿಸುತ್ತಿದ್ದಾಗಲೇ ಇದರ ಪ್ರಕಟಣೆ ನಿಂತುಹೋದುದು ದುರದೃಷ್ಟಕರ ಎನ್ನಬಹುದು.

ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮೀಸಲಾದ ಪತ್ರಿಕೆಗಳನ್ನು ಕುರಿತ ಈ ಲೇಖನದಲ್ಲಿ ವೈದ್ಯ ವಿಜ್ಞಾನದ ಪತ್ರಿಕೆಗಳನ್ನು ನಾನು ಪ್ರಸ್ತಾಪಿಸಿಲ್ಲ. ಈ ದಿಸೆಯಲ್ಲಿ ಮುಖ್ಯವಾಗಿ ಆಯುರ್ವೇದ ವಿಜ್ಞಾನದ ಹಲವಾರು ಪತ್ರಿಕೆಗಳನ್ನು ನಾವು ಗುರುತಿಸಬಹುದು. ಈ ಪತ್ರಿಕೆಗಳ ಪ್ರಕಟಣೆಯ ಸಾಹಸಗಾಥೆಯು ಪ್ರತ್ಯೇಕ ಲೇಖನವಾಗಿಬಿಡುತ್ತದೆ.

ಕನ್ನಡದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಲೇಖನಗಳ ಸೃಷ್ಟಿ ಮತ್ತು ಅವುಗಳ ಓದುಗರು ಎಂದಾಗ ಎರಡು ಅಭಿಪ್ರಾಯಗಳು ಬೆಳೆದು ಬಂದಿರುವುದನ್ನು ನಾವು ಗುರುತಿಸಬಹುದು. ಮೊದಲನೆಯದಾಗಿ ಸಾಂಪ್ರದಾಯಿಕ ಶಾಲಾಕಾಲೇಜು, ಸ್ನಾತಕೋತ್ತರ ತರಗತಿಗಳ ಅಧ್ಯಾಪಕರು, ವಿದ್ಯಾರ್ಥಿವರ್ಗ ಹಾಗೂ ಜನಸಾಮಾನ್ಯರಿಗೆ ಮಾತ್ರ ಇದು ಸಂಬಂಧಿಸಿದೆ. ಮತ್ತು ಎರಡನೆಯದಾಗಿ ಎಲ್ಲ ಲೇಖನಗಳೂ ಅತಿ ಸರಳವಾಗಿದ್ದು ಕೇವಲ ಜನಸಾಮಾನ್ಯರನ್ನು ಮಾತ್ರ ಉದ್ದೇಶಿಸಿರಬೇಕು ಎಂಬುದೇ ಈ ಅಭಿಪ್ರಾಯಗಳ ಸಾರಾಂಶ. ಈ ದೃಷ್ಟಿಕೋನವು ಬದಲಾಗಬೇಕು. ಏಕೆಂದರೆ ಈಗ ಪ್ರತಿ ವರ್ಷವೂ ಅಸಂಖ್ಯಾತ ಸಂಖ್ಯೆಯ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪದವೀಧರರಾಗುತ್ತಿದ್ದಾರೆ. ಅನೇಕ ಸಂಖ್ಯೆಯಲ್ಲಿರುವ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಅಧ್ಯಯನ ಮಾಡುತ್ತಿರುವ ಹಾಗೂ ದುಡಿಯುತ್ತಿರುವ ಕನ್ನಡ ಬಲ್ಲ ಉತ್ಸಾಹಿಗಳನ್ನು ಸಹ ಕನ್ನಡ ವಿಜ್ಞಾನ ಸಾಹಿತ್ಯದ ಬರೆವಣಿಗೆಗೆ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಆಧುನಿಕ ವಿಚಾರಗಳು ಜನತೆಯನ್ನು ತಲುಪಲು ಸಾಧ್ಯ. ಲೇಖನಗಳು ಜನಸಾಮಾನ್ಯರಿಗೆ ಮಾತ್ರ ಎಂಬ ನಿರ್ಬಂಧವಿರಬಾರದು. ಏಕೆಂದರೆ ಕೇವಲ ವಿಜ್ಞಾನದ ಮತ್ತು ತಂತ್ರಜ್ಞಾನದ ಅತ್ಯಾಧುನಿಕ ವಿಚಾರಗಳನ್ನು ತಿಳಿಸಲು ಹೊರಟಾಗ ಜನಪ್ರಿಯ ಲೇಖನವೆನ್ನುವ ಮಿತಿಯಿಂದ ಹೊರಬರಬೇಕಾಗುವುದು. ಆದ್ದರಿಂದಲೇ ಈ ಎರಡೂ ರೀತಿಯ ಲೇಖನಗಳು ರಚಿತವಾಗಿ ಪ್ರಕಟವಾಗಬೇಕು. ವಿಶೇಷ ಲೇಖನಗಳನ್ನು ಓದುವವರ ಸಂಖ್ಯೆಯನ್ನು ಹೆಚ್ಚಿಸಲು ಈಗ ಸಾಕಷ್ಟು ಅವಕಾಶಗಳಿವೆ. ಈ ದಿಸೆಯಲ್ಲಿ ವಿಜ್ಞಾನ ಸಾಹಿತ್ಯವು ನಿಂತನೀರಿನಂತೆಯೇ ಕೊಳೆಯುತ್ತಿದೆ. ಆದ್ದರಿಂದಲೇ ವಿಜ್ಞಾನ ಹಾಗೂ ತಂತ್ರಜ್ಞಾನ ಮತ್ತು ಔದ್ಯಮಿಕ ಕ್ಷೇತ್ರದ ಸಂಸ್ಥೆಗಳಲ್ಲಿರುವ ಕನ್ನಡಿಗರನ್ನು ಕನ್ನಡ ವಿಜ್ಞಾನ ಸಾಹಿತ್ಯದ ಬೆಳೆವಣಿಗೆಯ ದೃಷ್ಟಿಯಿಂದ ಸಂಘಟಿಸಬೇಕು. ಅವರುಗಳು ತಾವು ಅರಿತ ವಿಚಾರಗಳನ್ನು ತಮ್ಮ ಮಾತೃಭಾಷೆಯಲ್ಲಿ ತಿಳಿಸುವ ಔಚಿತ್ಯ-ಕರ್ತವ್ಯಗಳನ್ನು, ಅವರಿಗೆ ಮನವರಿಕೆ ಮಾಡಿಸಬೇಕು. ಇಂತಹ ಸಂಸ್ಥೆಗಳಲ್ಲಿರುವ ಕನ್ನಡಿಗರು ತಾವು ನಿರ್ಮಿಸಿಕೊಂಡ ದಂತಗೋಪುರಗಳಿಂದ ಹೊರಬಂದು, ಸಂಘಟಿತರಾಗಿ ತಮ್ಮ ಸಂಸ್ಥೆಗಳಿಂದ ವಿಜ್ಞಾನ-ತಂತ್ರಜ್ಞಾನ ನಿಯತಕಾಲಿಕೆಗಳನ್ನು ಪ್ರಕಟಿಸಲು ಆರಂಭಿಸಬೇಕು. ಇವರೊಡನೆ ಈ ಸಂಸ್ಥೆಗಳು ತಮ್ಮ ಅಧಿಕೃತ ಚಟುವಟಿಕೆಗಳಿಗೆ ಸಂಬಂಧಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ವಿಚಾರಗಳನ್ನು ಜನತೆಗೆ ತಿಳಿಸುವ ಜವಾಬ್ದಾರಿ ಅರಿತುಕೊಂಡು ಅಂತಹ ಕಾರ್ಯಕ್ರಮಗಳಿಗೆ ಹೆಚ್ಚಿಲ್ಲದಿದ್ದರೂ ಕನಿಷ್ಠ ಸೌಲಭ್ಯಗಳನ್ನಾದರೂ ಅಧಿಕೃತವಾಗಿ ಒದಗಿಸಬೇಕು. 

ಹೀಗೆ ಗಣಕ, ಎಲೆಕ್ಟ್ರಾನಿಕ್ಸ್‌, ಬಾಹ್ಯಾಂತರಿಕ್ಷ, ಮಾಹಿತಿ ತಂತ್ರಜ್ಞಾನ, ಸಂಘಟಿತ ವಸ್ತುಗಳು, ವೈಮಾನಿಕೀಯ, ದೃಕ್ಶ್ರವಣ ತಂತ್ರಜ್ಞಾನ, ಅಣುವಿಜ್ಞಾನ, ಭೌತವಿಜ್ಞಾನ, ಜೈವಿಕ ತಂತ್ರಜ್ಞಾನ ಮುಂತಾದ ಸಾರ್ವಜನಿಕ ಮತ್ತು ಖಾಸಗೀ ವಲಯದ ಉದ್ಯಮಗಳು ತಮ್ಮ ಕ್ಷೇತ್ರದಲ್ಲಿನ ಬೆಳೆವಣಿಗೆ ಕುರಿತ ಪ್ರತ್ಯೇಕ ನಿಯತಕಾಲಿಕೆಗಳನ್ನು ವಿವಿಧ ಸಂಸ್ಥೆಗಳ ಮೂಲಕ ಕನ್ನಡದಲ್ಲಿ ಪ್ರಕಟಿಸಲಾರಂಭಿಸಬೇಕು. ಇದರಿಂದ ಜನಸಾಮಾನ್ಯರಿಗೂ, ವೃತ್ತಿನಿರತರಿಗೂ ಹಾಗೂ ಮುಖ್ಯವಾಗಿ ವಿದ್ಯಾರ್ಥಿಗಳಿಗೂ ಜ್ಞಾನಾರ್ಜನೆಗೆ ಉಪಯೋಗವಾಗುತ್ತದೆ. ಹೀಗಾದಾಗಲೇ ಕನ್ನಡ ಜನತೆಯು ದಾಪುಗಾಲಿಡುತ್ತಿರುವ ವಿಜ್ಞಾನದ ಜೊತೆ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ.

ಪತ್ರಿಕೆಗಳನ್ನು ಪ್ರಕಟಿಸುವಷ್ಟೇ ಸಮಸ್ಯೆಗಳು ಅವುಗಳ ಪ್ರಸಾರದಲ್ಲೂ ಇವೆ. ಬಾಲವಿಜ್ಞಾನ, ವಿಜ್ಞಾನ ಸಂಗಾತಿ ಮತ್ತು ಆಹಾರ ವಿಜ್ಞಾನ ಪತ್ರಿಕೆಗಳು ರಾಜ್ಯದ ಎಲ್ಲಾ ಶಾಲೆಗಳ ಪುಸ್ತಕ ಭಂಡಾರಗಳಿಗೆ ತಲುಪುವ ನಿಶ್ಚಿತ ವ್ಯವಸ್ಥೆ ಕಾರಣ ಇವುಗಳ ಪ್ರಸಾರಕ್ಕೆ ಅಷ್ಟೊಂದು ಬಿಸಿ ತಟ್ಟಲಿಲ್ಲ/ತಟ್ಟಿಲ್ಲ. ರಾಜ್ಯಾದ್ಯಂತ ಇರುವ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವಿವಿಧ ಘಟಕಗಳ ಉತ್ಸಾಹಿ ಕಾರ್ಯಕರ್ತರ ಪ್ರಯತ್ನಗಳು ಬಾಲವಿಜ್ಞಾನದ ಹೆಚ್ಚಿನ ಪ್ರಸಾರಕ್ಕೆ ಕಾರಣವಾಗಿದೆ. ಇನ್ನಿತರ ಪತ್ರಿಕೆಗಳು ಪ್ರಸಾರ ಮಾರಾಟದ ಅನೇಕ ತೊಡಕುಗಳಿಗೆ ಸಿಲುಕಿ ಸೊರಗಿವೆ, ತೊಳಲಾಡುತ್ತಿವೆ. ಇನ್ನಿತರ ಪ್ರಕಟಣೆಗಳಂತಲ್ಲದ ವೈಜ್ಞಾನಿಕ ಪ್ರಕಟನೆಗಳು ಒಂದಕ್ಕೊಂದು ಪುರಕವಾದ ಲೇಖನಗಳನ್ನು ಹೊಂದಿರುವುದರಿಂದ, ಕನ್ನಡದ ಎಲ್ಲಾ ವೈಜ್ಞಾನಿಕ ಪತ್ರಿಕೆಗಳು ಹಾಗೂ ಗ್ರಂಥಗಳು ಒಂದೇ ಕೇಂದ್ರದಲ್ಲಿ ದೊರೆಯುವಂತಾಗಬೇಕು. ಇಂತಹ ಅನೇಕ ಕೇಂದ್ರಗಳು ರಾಜ್ಯಾದ್ಯಂತ ಹರಡಿಕೊಂಡಿರಬೇಕು. ಈ ರೀತಿಯ ಸಂಘಟನೆ ಈಗ ಅಗತ್ಯವಾಗಿದೆ. ಇಲ್ಲದಿದ್ದರೆ ಸಾಹಿತ್ಯ, ಸಂಸ್ಕೃತಿ, ಕಲೆ ಮುಂತಾದ ಕ್ಷೇತ್ರಗಳ ವೈವಿಧ್ಯಪುರ್ಣ ಗ್ರಂಥಗಳ ನಡುವೆ ವೈಜ್ಞಾನಿಕ ಪ್ರಕಟಣೆಗಳು, ಕಂಡೂ ಕಾಣದಂತೆ ಇಣುಕುತ್ತಾ ಎಲೆಮರೆಯ ಕಾಯಾಗಿಯೇ ಉಳಿದುಬಿಡುವುದಲ್ಲದೆ, ಜನಸಾಮಾನ್ಯರ ಬದುಕಿನ ಅಂಗವಾದ ವೈಜ್ಞಾನಿಕ ಬಳಕೆ, ಅದರ ಅರಿವಿಲ್ಲದೇ ಸೊರಗುತ್ತದೆ. ಆಗ ವೈಜ್ಞಾನಿಕ ಬದುಕು ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ.                  (ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ